Telegram Join My Telegram   WhatsApp Join My WhatsApp

ಸರ್ಕಾರಿ ಉದ್ಯೋಗದ ಕನಸು ನನಸಾಗಲಿ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಬಗೆ ಹೇಗೆ? – ಸಂಪೂರ್ಣ ಮಾರ್ಗದರ್ಶಿ

ಸರ್ಕಾರಿ ಉದ್ಯೋಗದ ಕನಸು ನನಸಾಗಲಿ

ಪೀಠಿಕೆ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಉದ್ಯೋಗ ಎಂದರೆ ಕೇವಲ ಒಂದು ಉದ್ಯೋಗವಲ್ಲ, ಅದು ಸ್ಥಿರತೆ, ಭರವಸೆ, ಸಾಮಾಜಿಕ ಗೌರವ ಮತ್ತು ಆರ್ಥಿಕ ಭದ್ರತೆಯ ಸಂಕೇತ. ಇಂದು ಸರ್ಕಾರಿ ಹುದ್ದೆಯನ್ನು ಪಡೆಯಲು ಕರ್ನಾಟಕದಲ್ಲಿ ಲಕ್ಷಾಂತರ ಸ್ಪರ್ಧಾರ್ಥಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಕೇವಲ ಓದುವುದರಿಂದ ಈ ಹುದ್ದೆ ಪಡೆಯಲು ಕಷ್ಟ ಸಾಧ್ಯ, ಅದಕ್ಕೆ ಸರಿಯಾದ ಯೋಜನೆ , ನಿರಂತರ ಪ್ರಯತ್ನ ಮತ್ತು ತಾಳ್ಮೆ ಹಾಗೂ ಸೂಕ್ತ ಮಾರ್ಗದರ್ಶನ ಬೇಕು. ಈ ಲೇಖನದಲ್ಲಿ ನೀವು ಹೇಗೆ ಬುದ್ಧಿವಂತಿಕೆಯಿಂದ ಪರೀಕ್ಷೆಗೆ ಸಿದ್ಧರಾಗಬೇಕು ಎಂಬುದನ್ನು ಹಂತ ಹಂತವಾಗಿ ತಿಳಿಯೋಣ.

ಮನಸ್ಸಿನ ಸಜ್ಜು (Mental preparation)

ಯಾವುದೇ ಪುಸ್ತಕ ತೆರೆಯುವ ಮೊದಲು , ನಿಮ್ಮ ಮನಸ್ಸನ್ನು ಸಜ್ಜುಗೊಳಿಸಿಕೊಳ್ಳಬೇಕು. ಸರ್ಕಾರಿ ಉದ್ಯೋಗ ತಯಾರಿ ಅಂದರೆ ಮ್ಯಾರಥಾನ್ ಓಟ, ಎಲ್ಲೂ ನಿಲ್ಲುವ ಹಾಗಿಲ್ಲ. ನಿಮ್ಮ ಸರ್ಕಾರಿ ಉದ್ಯೋಗದ ಕನಸು ನನಸಾಗಬೇಕೆಂದರೆ ಇವೆಲ್ಲವೂ ಸರ್ವೇಸಾಮಾನ್ಯ.

ಪರೀಕ್ಷಾ ಮಾದರಿಯನ್ನು ಅರ್ಥಮಾಡಿಕೊಳ್ಳುವುದು

ಯಾವುದೇ ಯುದ್ಧವನ್ನು ಗೆಲ್ಲಬೇಕಾದರೆ ಶತ್ರುಗಳ ಬಲ ಮತ್ತು ದೌರ್ಬಲ್ಯ ತಿಳಿಯಬೇಕು. ಹಾಗೆಯೇ, ಸರ್ಕಾರಿ ಹುದ್ದೆಯನ್ನು ಪಡೆಯಬೇಕೆಂದರೆ ಅದರ ಸಂಪೂರ್ಣ ಪಠ್ಯಕ್ರಮವನ್ನು ತಿಳಿದಿರಬೇಕು.

• ಪಠ್ಯಕ್ರಮದ ವಿಶ್ಲೇಷಣೆ : ಪರೀಕ್ಷೆಯ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್  ಮಾಡಿ, ಸಿಲಬಸ್ ಅನ್ನು ಸಂಪೂರ್ಣವಾಗಿ ಓದಬೇಕು.

• ಪರೀಕ್ಷೆಯ ಸ್ವರೂಪ : ವಿಷಯಗಳು, ಪ್ರಶ್ನೆಗಳ ಸಂಖ್ಯೆ, ನೆಗೆಟಿವ್ ಮಾರ್ಕಿಂಗ್ ಪದ್ಧತಿ ಮತ್ತು ಪರೀಕ್ಷಾ ಸಮಯದ ಮಿತಿ ಅಂದರೆ ಪರೀಕ್ಷೆಗೆ ಒಟ್ಟು ಎಷ್ಟು ಸಮಯ ಮೀಸಲಿಟ್ಟಿದ್ದಾರೆ ಎಂದು ತಿಳಿದುಕೊಳ್ಳಬೇಕು.

• ಅಧಿಕೃತತೆ : ಯಾವಾಗಲೂ ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್ಸೈಟ್ ಗಳನ್ನು ಮಾತ್ರ ನಂಬಬೇಕು.

ಓದಿನ ಸಮಯದ ನಿರ್ವಹಣೆ ( Time Management)

ಅನೇಕ ಅಭ್ಯರ್ಥಿಗಳು ದಿನಕ್ಕೆ 15 ಗಂಟೆ ಓದುತ್ತಾರೆ, ಆದರೆ ಸರಿಯಾದ ಫಲಿತಾಂಶ ಬಂದಿರುವುದಿಲ್ಲ . ಕಾರಣ ಇಷ್ಟೇ , ಅವರು ಓದುವ ವಿಧಾನ.

• ಟೈಮ್ ಟೇಬಲ್ : ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಓದಿಗೆ ಮೀಸಲಿಡಿ. ನಿಮ್ಮ ಓದಿನ ಸಾಮರ್ಥ್ಯಕ್ಕೆ ಅನುಗುಣವಾಗಿ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಿ.

• ಬೆಳಗಿನ ಜಾವ ಓದುವುದು : ಮನಸ್ಸು ಪ್ರಶಾಂತವಾಗಿರುವಾಗ ಕಠಿಣ ವಿಷಯಗಳನ್ನು ಓದಿ, ಸಂಜೆ ವೇಳೆ ರಿವಿಜನ್ ಅಥವಾ ಪ್ರಶ್ನೆ ಪತ್ರಿಕೆಯನ್ನು ಬಿಡಿಸಲು ಮೀಸಲಿಡಿ.

• ಸಮಯದ ವಿಭಜನೆ :  ಪ್ರತಿ ವಿಷಯಕ್ಕೆ ನಿರ್ದಿಷ್ಟ ಸಮಯವನ್ನು ಮೀಸಲಿಡಿ.  ನಿಮಗೆ ಕಷ್ಟ ಎನಿಸಿದ ವಿಷಯಕ್ಕೆ ಒಂದು ಗಂಟೆ ಜಾಸ್ತಿ ಮೀಸಲಿಡಿ.

ವಿಷಯವಾರು ತಯಾರಿ

ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದರೆ, ನಿಮಗೆ ತಿಳಿದೇ ಇರುತ್ತದೆ , ಕೆಲವು ವಿಷಯಗಳನ್ನು ಸಾಮಾನ್ಯವಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳುತ್ತಿರುತ್ತಾರೆ, ಉದಾಹರಣೆಗೆ ಸಾಮಾನ್ಯ ಜ್ಞಾನ ,ಇತಿಹಾಸ, ಭೂಗೋಳಶಾಸ್ತ್ರ, ಸಂವಿಧಾನ, ವಿಜ್ಞಾನ ಹಾಗೂ ಮಾನಸಿಕ ಸಾಮರ್ಥ್ಯ ಮತ್ತು ಪ್ರಚಲಿತ ಘಟನೆಗಳು

• ಸಾಮಾನ್ಯ ಜ್ಞಾನ ,ಇತಿಹಾಸ ,ಭೂಗೋಳಶಾಸ್ತ್ರ, ಸಂವಿಧಾನ, ವಿಜ್ಞಾನ – ಇವುಗಳನ್ನು ಯಾವಾಗಲೂ ಮೂಲ ಪಠ್ಯಪುಸ್ತಕಗಳಿಂದ ಮಾತ್ರ ಓದಬೇಕು .

• ಪ್ರಚಲಿತ ವಿದ್ಯಮಾನಗಳು ಇದು ನಿರ್ಣಾಯಕ ಪಾತ್ರ ವಹಿಸುತ್ತದೆ ಕಳೆದ ಒಂದು ವರ್ಷದ ಪ್ರಮುಖ ಸುದ್ದಿಗಳ ಮೇಲೆ ನಿಗಾ ಇಡಿ ಪ್ರತಿದಿನ ದಿನಪತ್ರಿಕೆ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಸ್ಟಡಿ ಮೆಟೀರಿಯಲ್ ಆಯ್ಕೆ

• 6 ರಿಂದ 12 ನೇ ತರಗತಿಯ ರಾಜ್ಯ ಪಠ್ಯಪುಸ್ತಕಗಳು ಅಥವಾ NCERT ಪಠ್ಯಪುಸ್ತಕಗಳು.

• ಯಾವಾಗಲೂ ಒಂದು ವಿಷಯಕ್ಕೆ ಒಂದೇ ಉತ್ತಮ ಪಠ್ಯಪುಸ್ತಕವನ್ನು ಇಟ್ಟುಕೊಳ್ಳಿ.

• ಒಂದೇ ವಿಷಯದ ಹಲವು ಪುಸ್ತಕಗಳ ರಾಶಿ ಹಾಕುವುದನ್ನು ಬಿಡಿ.

• ಹಲವು ಪುಸ್ತಕಗಳನ್ನು ಓದುವುದಕ್ಕಿಂತ, ಪ್ರಮುಖವಾದ ಒಂದೇ ಪುಸ್ತಕವನ್ನು ಹಲವು ಬಾರಿ ಓದುವುದು ಉತ್ತಮ.

• ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕಗಳು ದೊರಕುತ್ತವೆ , ಅವುಗಳಲ್ಲಿ ಪ್ರಸಿದ್ಧವಾದ ಪುಸ್ತಕಗಳನ್ನು ಮಾತ್ರ ಆಯ್ಕೆ ಮಾಡಿ.

• ಪುಸ್ತಕಗಳನ್ನು ಆಯ್ಕೆ ಮಾಡುವಾಗ ಪ್ರಸಿದ್ಧ ಲೇಖಕರ ಪುಸ್ತಕಗಳನ್ನು ಮಾತ್ರ ಆರಿಸಿಕೊಳ್ಳಬೇಕು .

ನೋಟ್ಸ್ ತಯಾರಿ

ಪುಸ್ತಕದಲ್ಲಿ ಇರುವುದನ್ನು ಬರೆಯುವುದು ನೋಟ್ಸ್ ಅಲ್ಲ, ಓದಿದ ವಿಷಯವನ್ನು ನಿಮ್ಮದೇ ಭಾಷೆಯಲ್ಲಿ, ನಿಮ್ಮದೇ ಅನುಭವದಲ್ಲಿ , ನಿಮ್ಮದೇ ವಾಕ್ಯದಲ್ಲಿ ನಿಮಗೆ ಅರ್ಥವಾಗುವಂತೆ ಬರೆಯುವುದೇ ನೋಟ್ಸ್.

•  ಯಾವಾಗಲೂ ಸಂಪೂರ್ಣ ವಾಕ್ಯವನ್ನು ಬರೆಯಬೇಡಿ, ನಿಮಗೆ  ನೆನಪಿರುವ ಹಾಗೆ ಮುಖ್ಯ ಅಂಶಗಳನ್ನು ಮಾತ್ರ ಬರೆಯಿರಿ.

• ಸಂಕೀರ್ಣ ವಿಷಯಗಳನ್ನು ಚಿತ್ರಗಳ ರೂಪದಲ್ಲಿ ಬರೆದಿಟ್ಟುಕೊಳ್ಳಿ, ಇದು ರಿವಿಜನ್ ಮಾಡಲು ಸುಲಭವಾಗಿ ಆಗುತ್ತದೆ.

ಅಭ್ಯಾಸ ಮತ್ತು ಕ್ವಿಜ್ ಹಾಗೂ ಟೆಸ್ಟ್ ಸರಣಿಗಳು

• ಕಳೆದ 10 ರಿಂದ 15 ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ, ಇದು ಪರೀಕ್ಷೆಯ ಪ್ರಶ್ನೆಗಳನ್ನು ಅರಿಯಲು ಮತ್ತು ಯಾವ ರೀತಿ ಪ್ರಶ್ನೆಗಳು ಬರುತ್ತವೆ ಎಂದು ತಿಳಿಯಲು ಅತ್ಯುತ್ತಮ ಮಾರ್ಗವಾಗಿದೆ.

• ವಾರಕ್ಕೆ ಎರಡು ಬಾರಿ ಆದರೂ ಕ್ವಿಜ್ ಸರಣಿಗಳು ಹಾಗೂ  ಟೆಸ್ಟ್ ಗಳನ್ನು ಬರೆಯಿರಿ, ಇದು ನಿಮ್ಮ ವೇಗ ಮತ್ತು ನಿಖರತೆಯನ್ನು ಹೆಚ್ಚಿಸುತ್ತದೆ.

• ಕ್ವಿಜ್ ಸರಣಿಗಳು ಹಾಗೂ ಟೆಸ್ಟ್ ಗಳನ್ನ ಬರೆಯುವುದರಿಂದ ನಿಮ್ಮ ಸಾಮರ್ಥ್ಯ ಎಷ್ಟಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಹಾಗೆ ಎಲ್ಲಿ ತಪ್ಪು ಮಾಡಿದ್ದೇನೆ ಅದನ್ನು ಹೇಗೆ ತಿದ್ದಿಕೊಳ್ಳಬೇಕು ಎಂಬುದು ಕೂಡ ಅರ್ಥವಾಗುತ್ತದೆ.

• ಟೆಸ್ಟ್ ಗಳನ್ನು ಬರೆದ ನಂತರ ಯಾವ ವಿಷಯದಲ್ಲಿ ಕಡಿಮೆ ಅಂಕ ಬಂದಿದೆ , ಸಮಯ ನಿರ್ವಹಣೆ ಸರಿಯಾಗಿದೆಯೇ ಎಂಬುದನ್ನು ವಿಶ್ಲೇಷಿಸಿ ಮರುದಿನ ಆ ಟಾಪಿಕ್ ಅನ್ನು ಸಂಪೂರ್ಣವಾಗಿ ಪುನರಾವರ್ತಿಸಿ ಸರಿಪಡಿಸಿಕೊಳ್ಳಬೇಕು.

ಸೋಶಿಯಲ್ ಮೀಡಿಯಾ ಬ್ರೇಕ್

ನಿಮ್ಮ ಸರ್ಕಾರಿ ಉದ್ಯೋಗದ ಕನಸು ನನಸಾಗಬೇಕು ಎಂದರೆ , ನೀವು ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಂತಹ ಹವ್ಯಾಸಗಳಿಗೆ ಸ್ವಲ್ಪ ಬ್ರೇಕ್ ಹಾಕಲೇಬೇಕು, ಯಾವಾಗಲೂ ಓದಿನ ಕಡೆ ಹೆಚ್ಚು ಗಮನ ಇರಬೇಕು, ನಿಮ್ಮ ಸರ್ಕಾರಿ ಉದ್ಯೋಗಕ್ಕೆ ಉಪಯೋಗ ಆಗುವಂತಹ ವಿಡಿಯೋಗಳು ಮತ್ತು ಸ್ಟಡಿ ಮೆಟೀರಿಯಲ್ ಗಳು ಇವುಗಳನ್ನು ನೋಡಲು ಮಾತ್ರ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಗಳನ್ನು ಬಳಸಿ , ಯಾವುದೇ ಅನಾವಶ್ಯಕ ವಿಡಿಯೋಗಳಿಗಾಗಿ, ರೀಲ್ಸ್ ಗಳಿಗಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.

ನೀವು ನಿಮ್ಮ ಕಷ್ಟಗಳನ್ನು ಹಾಗೂ ನಿಮ್ಮ ತಂದೆ ತಾಯಿಯ ಕಷ್ಟಗಳನ್ನು ಬಗೆಹರಿಸಲು , ನಿಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಪಡೆಯಲೇಬೇಕು ಎಂಬ ನಿಷ್ಠೆಯಿಂದ ಓದಲು ಬಂದಿರುತ್ತೀರಿ, ಆಗಿದ್ದ ಮೇಲೆ ಈ ಎಲ್ಲಾ ಸೋಶಿಯಲ್ ಮೀಡಿಯಾ ಇವುಗಳನ್ನು ನಿಮಗೆ ಉಪಯೋಗ ಆಗುವ ರೀತಿಯಲ್ಲಿ ಮಾತ್ರ ಬಳಸಿಕೊಳ್ಳಿ ಯಾವುದೇ ಅನಾವಶ್ಯಕ ರಿಲ್ಸ್ ಗಳು ಮತ್ತು ವಿಡಿಯೋಗಳನ್ನು ನೋಡುತ್ತಾ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.

ಮಾನಸಿಕ ಮತ್ತು ದೈಹಿಕ ಆರೋಗ್ಯ

ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಅತ್ಯಗತ್ಯ. ದೈಹಿಕವಾಗಿ ಸದೃಢರಾಗಿರಲು ಪ್ರತಿದಿನ 30 ನಿಮಿಷ ನಡಿಗೆ ಅಥವಾ ಯೋಗವನ್ನು ಮಾಡಿ. ಸಾಕಷ್ಟು ನೀರು ಕುಡಿಯಿರಿ ಪೌಷ್ಟಿಕ ಆಹಾರವನ್ನು ಸೇವಿಸಿ.

ಒತ್ತಡ ನಿರ್ವಹಣೆ :  ಸರ್ಕಾರಿ ಕೆಲಸಕ್ಕಾಗಿ ಕಾಯುವಾಗ ಆತಂಕ ಸಹಜ , ಅದಕ್ಕಾಗಿ ಪ್ರತಿದಿನ 15 ರಿಂದ 20 ನಿಮಿಷ ಧ್ಯಾನ ಮಾಡಿ.

ಆರೋಗ್ಯ:  ಪ್ರತಿ ದಿನ ಕನಿಷ್ಠ 7 ಗಂಟೆ ನಿದ್ದೆ ಮಾಡಿ, ಒಳ್ಳೆಯ ಪೌಷ್ಟಿಕ ಆಹಾರವನ್ನು ಸೇವಿಸಿ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮೆದುಳು ವೇಗವಾಗಿ ಕೆಲಸ ಮಾಡುತ್ತದೆ.

ನಕಾರಾತ್ಮಕ ಅಂದರೆ ಕೆಟ್ಟ ಆಲೋಚನೆಗಳನ್ನು ದೂರವಿಡಿ , ಸಣ್ಣ ಸಣ್ಣ ಗುರಿ ಸಾಧಿಸಿದಾಗ ಸ್ವಯಂ ಪ್ರೋತ್ಸಾಹ ನೀಡಿಕೊಳ್ಳಿ , ವಾರದಲ್ಲಿ ಒಂದು ದಿನ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಿ .

ನೆನಪಿಡಿ : ಆರೋಗ್ಯ ಕೆಟ್ಟರೆ ಪರೀಕ್ಷೆಯಲ್ಲಿ ಗಮನ ಕೇಂದ್ರೀಕರಿಸಲಾಗದು. ಆದ್ದರಿಂದ ದೇಹ ಮತ್ತು ಮನಸ್ಸನ್ನು ಯಾವಾಗಲೂ ಫಿಟ್ ಆಗಿಡಿ, ಯಶಸ್ಸು ಸ್ವತಃ ಬರುತ್ತದೆ.

ಪರೀಕ್ಷೆಯ ಒಂದು ತಿಂಗಳ ಮುಂಚೆ ಹೇಗೆ ತಯಾರಿ ಮಾಡಬೇಕು?

ಪರೀಕ್ಷೆಗೆ ಕೇವಲ 30 ದಿನಗಳು ಬಾಕಿ ಇರುವಾಗ ಹೆಚ್ಚಿನ ಅಭ್ಯರ್ಥಿಗಳು ಭಯ ಪಡುತ್ತಾರೆ. ಆದರೆ ಆ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ನಿಮ್ಮ ನಿಮ್ಮ ಅಂಕವನ್ನು ಕನಿಷ್ಠ 20 % ರಷ್ಟು ಹೆಚ್ಚಿಸಬಹುದು. ಪರೀಕ್ಷೆಗೆ ಕೇವಲ ಒಂದು ತಿಂಗಳು ಬಾಕಿ ಇದೆ ಎಂದರೆ ಅದು ಒತ್ತಡದ ಸಮಯ ಅಲ್ಲ , ಬದಲಿಗೆ ಸ್ಮಾರ್ಟ್ ವರ್ಕ್ ಮಾಡುವ ಸಮಯ . ಈ ಸಮಯದಲ್ಲಿ ನೀವು ಹೊಸ ವಿಷಯಗಳನ್ನು ಕಲಿಯುವುದಕ್ಕೆ ಕಲಿತಿರುವುದನ್ನು ನೆನಪಿಸಿಕೊಳ್ಳುವುದು ಮತ್ತು ರಿವಿಜನ್ ಅತ್ಯಂತ ಮುಖ್ಯ. ಪರೀಕ್ಷೆಯ ಹಿಂದಿನ 30 ದಿನಗಳನ್ನು ಸದುಪಯೋಗಪಡಿಸಿಕೊಳ್ಳಲು ಇಲ್ಲಿದೆ ಒಂದು ಸಂಪೂರ್ಣ ಮಾರ್ಗದರ್ಶಿ

ಈ 30 ದಿನಗಳಲ್ಲಿ ಕಡ್ಡಾಯವಾಗಿ ಮಾಡಬೇಕಾದ  ಕೆಲಸಗಳು

• ಮೊದಲಿಗೆ ನಿಮ್ಮ ಬಳಿ ಇರುವ ಎಲ್ಲಾ ವಿಷಯಗಳ ಪಟ್ಟಿಯನ್ನು ಮಾಡಿ , ಯಾವ ವಿಷಯ ಸುಲಭ ಮತ್ತು ಯಾವ ವಿಷಯ ಕಠಿಣ ಎಂದು ವರ್ಗೀಕರಿಸಿ.

• ಪೂರ್ಣ ಪುಸ್ತಕಗಳನ್ನು ಓದುವ ಬದಲು ನೀವು ಹೈಲೈಟ್ ಮಾಡಿದ ಪಾಯಿಂಟ್ಸ್ ಮತ್ತು ಮುಖ್ಯವಾದoತಹ ವಿಷಯಗಳನ್ನು ಪದೇ ಪದೇ ಓದಿ.

• ಈ ಹಂತದಲ್ಲಿ ನೀವು ಎಷ್ಟು ಓದಿದ್ದೀರಿ ಎನ್ನುವುದಕ್ಕಿಂತ ಎಷ್ಟು ವೇಗವಾಗಿ ಮತ್ತು ನಿಖರವಾಗಿ ಉತ್ತರಿಸಬಲ್ಲಿರಿ ಎನ್ನುವುದೇ ಮುಖ್ಯ ಅದಕ್ಕಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ.

• ಒಂದು ನಿರ್ದಿಷ್ಟ ಸಮಯದಲ್ಲಿ ಪರೀಕ್ಷೆಯನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಿ ಇದನ್ನೇ ಟೈಮ್ ಮ್ಯಾನೇಜ್ಮೆಂಟ್ ಎಂದು ಹೇಳಲಾಗುತ್ತದೆ. ಇದು ನಿಮ್ಮ ಪರೀಕ್ಷಾ ಭೀತಿಯನ್ನು ದೂರ ಮಾಡುತ್ತದೆ ಹಾಗಾಗಿ ಟೈಮ್  ಮ್ಯಾನೇಜ್ಮೆಂಟ್ ಮಾಡುವುದನ್ನು ಕಲಿಯಿರಿ.

• ಅಂತಿಮ ದಿನಗಳಲ್ಲಿ ಓದುವ ಒತ್ತಡ ಹೇರಬೇಡಿ, ಕನಿಷ್ಠ ಏಳರಿಂದ ಎಂಟು ಗಂಟೆಗಳವರೆಗೆ ಆರಾಮದಾಯಕ ನಿದ್ರೆಯನ್ನು ಮಾಡಿ ಏಕೆಂದರೆ ನಿದ್ರೆಯ ಕೊರತೆಯಿಂದ ಓದಿದ್ದು ಮರೆತು ಹೋಗುವ ಸಾಧ್ಯತೆ ಹೆಚ್ಚು .

• ಒಂದು ತಿಂಗಳ ತಯಾರಿ ಎಂದರೆ ಕೇವಲ ಓದುವಿಕೆ ಅಲ್ಲ, ಅದು ನಿಮ್ಮ ಶಿಸ್ತು ಮತ್ತು ತಾಳ್ಮೆಯ ಪರೀಕ್ಷೆ . ಈ ಸಮಯದಲ್ಲಿ ಹೊಸ ಪುಸ್ತಕಗಳನ್ನು ಕೊಳ್ಳಬೇಡಿ ಅಥವಾ ಸ್ನೇಹಿತರೊಂದಿಗೆ ಪರೀಕ್ಷೆಯ ಬಗ್ಗೆ ಅತಿಯಾಗಿ ಚರ್ಚಿಸಿ ಆತಂಕ ಪಡಬೇಡಿ. ನೀವು ಇದುವರೆಗೂ ಮಾಡಿರುವ ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಡಿ. ನಿಮ್ಮ ಆತ್ಮವಿಶ್ವಾಸವೇ ನಿಮ್ಮನ್ನು ಅರ್ಧ ಗೆಲ್ಲಿಸುತ್ತದೆ.

• ಒಂದು ತಿಂಗಳು ಕ್ರಮಬದ್ಧವಾಗಿ ರಿವಿಶನ್ ಮತ್ತು ಮಾಕ್ ಟೆಸ್ಟ್ ಗಳನ್ನು ಸರಿಯಾಗಿ ಕೊಟ್ಟರೆ, ನೀವು ಆತ್ಮವಿಶ್ವಾಸದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಬಹುದು. ಗಾಬರಿಯನ್ನು ಹೊರಗಿಡಿ, ಸ್ಮೈಲ್ ಮಾಡಿ . ನಿಮ್ಮ ದಿನಚರಿಯನ್ನು ಕಟ್ಟುನಿಟ್ಟಾಗೇ ಅನುಸರಿಸಿ. ಯಶಸ್ಸು ಖಂಡಿತ ನಿಮ್ಮದಾಗಲಿದೆ,  ಸರ್ಕಾರಿ ಉದ್ಯೋಗದ ಕನಸು ನನಸಾಗಲಿದೆ.

ತೀರ್ಮಾನ 

ಮೊದಲಿಗೆ ನಿಮ್ಮ ಸರ್ಕಾರಿ ಉದ್ಯೋಗದ ಕನಸು ನನಸಾಗಲಿ ಎಂದು ಹಾರೈಸುತ್ತಾ, ಈ ಮಾರ್ಗದರ್ಶನ ಇಲ್ಲಿಯವರೆಗೆ ಓದಿದ್ದೀರಿ ಎಂದರೆ ನಿಮ್ಮೊಳಗೆ ಏನನ್ನಾದರೂ ಸಾಧಿಸುವ ಹಂಬಲವಿದೆ , ಸರ್ಕಾರಿ ಉದ್ಯೋಗದ ಕನಸಿದೆ . ಅದು ಕೇವಲ ಕನಸಲ್ಲ ಅದು ನಿಮ್ಮ ಬದುಕನ್ನು ಬದಲಾಯಿಸುವ ಹಂಬಲ. ತಂದೆ ತಾಯಿಯ ಮುಖದಲ್ಲಿ ಒಮ್ಮೆ ನಗು ತರಬೇಕೆಂಬ ಕಾತರವಿದೆ. ನಿಮ್ಮ ಶಾಲಾ ದಿನದ ಗೆಳೆಯರು ,ಸಂಬಂಧಿಕರು , ಅಕ್ಕ ಪಕ್ಕದ ಮನೆಯವರು ಈಗ ಏನು ಮಾಡುತ್ತಿದ್ದೀಯಾ ಎಂದು ಕೇಳಿದಾಗ ಹೆಮ್ಮೆಯಿಂದ ನಾನು ಸರ್ಕಾರಿ ಉದ್ಯೋಗಿ ಎಂದು ಹೇಳುವಂತಾಗಲಿ .

ಪ್ರತಿಯೊಬ್ಬ ಸ್ಪರ್ಧಾರ್ಥಿಯ ಕನಸು, ನನ್ನ ಕನಸಿನ ಉದ್ಯೋಗವನ್ನು ಪಡೆಯಲೇಬೇಕು ಎಂಬುದು ಆದ್ದರಿಂದ ನೀವು ಎಲ್ಲೂ ನಿಲ್ಲಬೇಡಿ. ಬೆಳಗಿನ ಸೂರ್ಯನನ್ನು ಕಾಣಬೇಕಾದರೆ ರಾತ್ರಿಯ ಕತ್ತಲೆಯನ್ನು ದಾಟಲೇಬೇಕು , ನಿಮ್ಮ ಕಷ್ಟ, ನೀವು ಮಾಡಿದ ದಿನಚರಿ ,ನಿಮ್ಮ ಬೆವರು ಒಂದು ದಿನ ಫಲ ನೀಡಲೇಬೇಕು. ಪ್ರಕೃತಿಯ ನಿಯಮವೇ ಹಾಗೆ ಬಿತ್ತಿದ ಬೀಜ ಮೊಳಕೆ ಒಡೆಯದೆ ಇರುವುದಿಲ್ಲ ಹಾಗೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ.

ಸೋಲಿಗೆ ಅಂಜಬೇಡಿ , ಪ್ರಯತ್ನವನ್ನು ನಿಲ್ಲಿಸಬೇಡಿ . ನೀವು ಈಗ ಯಾವ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಿ ? ನಿಮ್ಮ ಗುರಿ ಏನು?  ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ , ನಾವು ಮುಂದಿನ ದಿನಗಳಲ್ಲಿ ನಿರ್ದಿಷ್ಟ ವಿಷಯಗಳ ಬಗ್ಗೆ ಇನ್ನೂ ಹೆಚ್ಚು ಚರ್ಚಿಸೋಣ!

ನಿಮ್ಮ ಸರ್ಕಾರಿ ಉದ್ಯೋಗದ ಕನಸು ಕನಸಾಗದೆ ನನಸಾಗಲಿ

ಧನ್ಯವಾದಗಳು. 

Visit website: samagra mahiti sanchari 

Leave a Comment